ಕನ್ನಡ ಕಾದಂಬರಿ ಸಾರ್ವಭೌಮ, ಕರ್ನಾಟಕ, ಕನ್ನಡ ಪರ ಪ್ರಮುಖ ಹೋರಾಟಗಾರರಾಗಿದ್ದ, ಕನ್ನಡ ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು ದಿವಂಗತ ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ ನ ಕೃ) ಹೆಸರಿನಲ್ಲಿ ಅನಕೃ ಪ್ರತಿಷ್ಠಾನ ನೀಡುವ 2024 ಮತ್ತು 2025ನೇ ಸಾಲಿನ “ಅನಕೃ” ಪ್ರಶಸ್ತಿಗೆ ಲೇಖಕಿ ಎಲ್‌ವಿ ಶಾಂತಕುಮಾರಿ, ವಿದ್ವಾಂಸ ಆರ್. ಗಣೇಶ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ “ಕನ್ನಡ ಪುಸ್ತಕ ಹಬ್ಬ 2025” (Kannada Pustaka Habba 2025) ಕಾರ್ಯಕ್ರಮದಲ್ಲಿ ಸಾಹಿತಿ ಎಸ್ಆರ್ ರಾಮಸ್ವಾಮಿ ಅವರು ನವೆಂಬರ್ 9ರಂದು ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಅನಕೃ ಪ್ರತಿಷ್ಠಾನವು 2024 ಮತ್ತು 2025ನೇ ಸಾಲಿನ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಈ ಪ್ರಶಸ್ತಿಯು ತಲಾ 50 ಸಾವಿರ ರೂಪಾಯಿ ನಗದು ಬಹುಮಾನ ಒಳಗೊಂಡಿರುತ್ತದೆ. “ನವೆಂಬರ್ 9ರಂದು ಕನ್ನಡ ಪುಸ್ತಕ ಹಬ್ಬ 2025ರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಕೃ ಪ್ರತಿಷ್ಠಾನದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ವಹಿಸಲಿದ್ದಾರೆ. ಹಿರಿಯ ಸಾಹಿತಿ ಎಸ್ಆರ್ ರಾಮಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ” ಎಂದು ಅನಕೃ ಪ್ರತಿಷ್ಠಾನದ ಕಾರ್ಯದರ್ಶಿ ಗೌತಮ್ ಎಲ್‌ಕೆ ತಿಳಿಸಿದ್ದಾರೆ.
ಎಲ್‌ವಿ ಶಾಂತಕುಮಾರಿ ಬಗ್ಗೆ
ಕನ್ನಡ ಪ್ರಮುಖ ಲೇಖಕಿ ಎಲ್‌ವಿ ಶಾಂತಕುಮಾರಿ. ಕಾವ್ಯ, ಲಲಿತ ಪ್ರಬಂಧಗಳು, ವಿಮರ್ಶೆ ಮತ್ತು ಅನುವಾದಗಳಿಂದ ಖ್ಯಾತಿ ಪಡೆದಿದ್ದಾರೆ. 1938ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು ನಿವೃತ್ತ ಪ್ರಾಧ್ಯಾಪಕಿ. ಎಂ. ಎ. (ಇಂಗ್ಲಿಷ್) ಮತ್ತು ಹಿಂದಿ (ವಿಶಾರದ) ಪದವೀಧರರಾಗಿದ್ದಾರೆ. ‘ನೆನಪು ಗರಿ ಬಿಚ್ಚಿದಾಗ’ (ಜೀವನ ಚಿತ್ರಗಳು), ‘ಚೈತನ್ಯದ ಚಿಲುಮೆ’ (ಜೀವನ ಚಿತ್ರಗಳು), ‘ಪಪೆ ಮತ್ತು ಇತರ ಕತೆಗಳು’ (ಅನುವಾದ), ‘ಯುಗಸಾಕ್ಷಿ’ (ವಿಮರ್ಶೆ) ಇವರ ಪ್ರಮುಖ ಕೃತಿಗಳು. ಎಲ್‌ವಿ ಶಾಂತಕುಮಾರಿ ಬರೆದಿರುವ ನಮ್ಮೆಲ್ಲರ ತಾಯಿ ಭಾರತ, ಭಾರತದ ಧೀರ ಚೇತನಗಳು, ಮಾಸ್ತಿ ಕಥಾಲೋಕ ಮುಂತಾದ ಕೃತಿಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯದ ಸಾಹಿತ್ಯಬುಕ್ಸ್.ಕಾಂ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು.
ವಿದ್ವಾಂಸ ಮತ್ತು ಶತಾವಧಾನಿ ಆರ್. ಗಣೇಶ್ ಕುರಿತು
ವಿದ್ವಾಂಸ ಮತ್ತು ಶತಾವಧಾನಿ ಆರ್. ಗಣೇಶ್ ಅವರು ಅವಧಾನ ಕಲೆಯ ಪ್ರಮುಖ ಪ್ರತಿಪಾದಕ, ಸಂಸ್ಕೃತ ಮತ್ತು ಕನ್ನಡದ ವಿದ್ವಾಂಸ, ಹಲವು ಭಾಷೆಗಳಲ್ಲಿ ಪರಿಣತಿ ಪಡೆದಿದ್ದಾರೆ. “ಅವಧಾನ ಕಲೆ” ಕುರಿತು ತಮ್ಮ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯದಿಂದ ಡಿ. ಲಿಟ್ ಪದವಿ ಪಡೆದಿದ್ದಾರೆ. ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1000 ಕ್ಕೂ ಹೆಚ್ಚು ಅಷ್ಟಾವಧಾನಗಳನ್ನು ಮತ್ತು 5 ಶತಾವಧಾನಗಳನ್ನು ಮಾಡಿದ್ದಾರೆ. ಸಂಸ್ಕೃತ, ಕನ್ನಡ, ತೆಲುಗು, ತಮಿಳು, ಗ್ರೀಕ್, ಲ್ಯಾಟಿನ್ ಮತ್ತು ಇಟಾಲಿಯನ್ ಸೇರಿದಂತೆ 18 ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ. ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್, ಮೆಟೀರಿಯಲ್ ಸೈನ್ಸ್, ಮೆಟಲರ್ಜಿ ಮತ್ತು ಸಂಸ್ಕೃತದಲ್ಲಿ ಪದವಿಗಳನ್ನು ಪಡೆದಿದ್ದಾರೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿದ್ದಾರೆ. ಭಾರತೀಯ ಕಲೆ ಮತ್ತು ಸೌಂದರ್ಯಶಾಸ್ತ್ರದ ವಿದ್ವಾಂಸರಾಗಿ, ಕಾವ್ಯ ಮತ್ತು ನಾಟ್ಯಶಾಸ್ತ್ರದ ಬಗ್ಗೆ ವಿಶೇಷ ಅಧ್ಯಯನ ಕೋರ್ಸ್‌ಗಳನ್ನು ನಡೆಸಿದ್ದಾರೆ. ಭಟ್ಟತೌತನ ಕಾವ್ಯಕೌತುಕ, ಸಾಮಾನ್ಯ ಧರ್ಮ, ಕಡಲಲ್ಲಿ ಮುಗಿಲ ಬೆರಗು, ಭಾರತೀಯ ಕ್ಷಾತ್ರಪರಂಪರೆ ಸೇರಿದಂತೆ ಶತಾವಧಾನಿ ಆರ್. ಗಣೇಶ್ ಅವರ ಹಲವು ಕೃತಿಗಳು ಸಾಹಿತ್ಯಬುಕ್ಸ್.ಕಾಂ ವೆಬ್‌ಸೈಟ್‌ನಲ್ಲಿದೆ.
ಕನ್ನಡ ಪುಸ್ತಕ ಹಬ್ಬ 2025ರ ಸಂಪೂರ್ಣ ಕಾರ್ಯಕ್ರಮಗಳ ಕ್ಯಾಲೆಂಡರ್ ಇಲ್ಲಿದೆ