ಕನ್ನಡ ಪುಸ್ತಕ ಹಬ್ಬದಲ್ಲಿ ಭಾರತೀಯ ಸಂಸ್ಕೃತಿ ಚಿಂತನೆಯ 8 ಕೃತಿಗಳ ಲೋಕಾರ್ಪಣೆ

ಬೆಂಗಳೂರು, ನ. 23: ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ 5ನೇ ಕನ್ನಡ ಪುಸ್ತಕ ಹಬ್ಬದ ವೇದಿಕೆಯಲ್ಲಿ ರಾಷ್ಟ್ರೋತ್ಥಾನ ಪ್ರಕಟಿಸಿರುವ 8 ಕೃತಿಗಳನ್ನು ಶ್ರೀ ಅಜಕ್ಕಳ ಗಿರೀಶ್‌ಭಟ್‌ ಅವರು ಲೋಕಾರ್ಪಣೆ ಮಾಡಿದರು.

ಲೋಕಾರ್ಪಣಗೊಂಡ 8 ಕೃತಿಗಳು:

  • ಸೂಕ್ತಿ ಸ್ತಬಕ (ಸುಭಾಷಿತ ಸಂಗ್ರಹ) – ನಾಡೋಜ ಡಾ. ಎಸ್.‌ ಆರ್.‌ ರಾಮಸ್ವಾಮಿ
  • ಸಮಾಜಕಾರ್ಯ ಸಂಹಿತೆ – ನಾಡೋಜ ಡಾ. ಎಸ್.‌ ಆರ್.‌ ರಾಮಸ್ವಾಮಿ
  • ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ – ಶ್ರೀ ಮಂಜುನಾಥ ಅಜ್ಜಂಪುರ
  • ಪುನರುತ್ಥಾನ: ಆಚಾರ್ಯ ಶಂಕರರ ಜೀವನಾಧಾರಿತ ಕಾದಂಬರಿ (ಮರಾಠಿ ಮೂಲ – ಡಾ. ಸಚ್ಚಿದಾನಂದ ಶೇವಡೆ) – (ಕನ್ನಡಕ್ಕೆ) ಶ್ರೀಮತಿ ಸುಮಾ ದ್ವಾರಕಾನಾಥ್‌
  • ದ ಪಲ್ಲವ ಎಂಪಯರ್‌ (ಇಂಗ್ಲಿಷ್) – ಶ್ರೀಮತಿ ಶ್ರೀಪ್ರಿಯಾ ಶ್ರೀನಿವಾಸನ್
  • ಎ ಲಿಟರರಿ ಲ್ಯುಮಿನರಿ (ಇಂಗ್ಲಿಷ್) – ಪ್ರೊ. ಎಲ್. ವಿ. ಶಾಂತಕುಮಾರಿ
  • ಇಂಪಾರ್ಟೆನ್ಸ್ ಆಫ್ ರೀರೈಟಿಂಗ್ ಅವರ್‌ ದಿಸ್ಟಾರ್ಟೆಡ್ ಇಂಡಿಯನ್ ಹಿಸ್ಟರಿ (ಇಂಗ್ಲಿಷ್) – ಶ್ರೀ ಮಂಜುನಾಥ ಅಜ್ಜಂಪುರ
  • ಎಕನಾಮಿಕ್ ಐಡಿಯಾಸ್ ಅಂಡ್ ಥಾಟ್ಸ್ ಆಫ್ ದಾದಾಭಾಯಿ ನವರೋಜಿ (ಇಂಗ್ಲಿಷ್) – ಪ್ರೊ. ಎಂ ಎಂ ಗುಪ್ತ

ಲೇಖಕರು ಹಾಗೂ ಖ್ಯಾತ ತಾಳಮದ್ದಲೆ ಕಲಾವಿದರೂ ಆದ ಶ್ರೀ ದಿವಾಕರ ಹೆಗಡೆ ಕೆರೆಹೊಂಡ ಅವರು ಲೋಕಾರ್ಪಣೆಗೊಂಡ ಕನ್ನಡದ ನಾಲ್ಕು ಕೃತಿಗಳ ಪರಿಚಯ ಮಾಡಿದರು.

ಮೊದಲ ಕೃತಿ, ಶ್ರೀಮತಿ ಸುಮಾ ದ್ವಾರಕನಾಥ್ ಅವರು ಕನ್ನಡಕ್ಕೆ ತಂದ ಶಂಕರಾಚಾರ್ಯರ ಜೀವನಾಧಾರಿತ ಕಾದಂಬರಿ, ಪುನರುತ್ಥಾನ. ಇದರ ಮೂಲ ಮರಾಠಿಯ ಡಾ. ಸಚ್ಚಿದಾನಂದ ಶೇವಡೆಯವರ ಕೃತಿಯಾಗಿದೆ. ಶಂಕರಾಚಾರ್ಯರ ಬದುಕೇ ಪವಾಡ. 32 ವರ್ಷಗಳಲ್ಲಿ ಒಬ್ಬ ವ್ಯಕ್ತಿ ಇಷ್ಟು ಸಾಧನೆ ಮಾಡಬಹುದೇ ಎನ್ನುವುದೇ ಪವಾಡ. ಮನುಷ್ಯ ಶಕ್ತಿಯನ್ನು ಮೀರಿದ್ದ ವಿಚಾರ ನಮ್ಮನ್ನು ಸದಾ ಕಾಲ ಆಕರ್ಷಿಸುತ್ತದೆ. ನಮಗೆ ಪವಾಡದ ಬಗೆಗೆ ಸದಾ ಆಕರ್ಷಣೆ ಇದ್ದೇಇದೆ.

ಇನ್ನೊಂದು ಕೃತಿ ಸಮಾಜಕಾರ್ಯ ಸಂಹಿತೆಯು ಸಮಾಜಕಾರ್ಯಕ್ಕೆ ಒಂದು ಸಂಘಟಿತ ರೂಪ ಕೊಟ್ಟು ನಾಡೋಜ ಡಾ. ಎಸ್. ಆರ್‌ ರಾಮಸ್ವಾಮಿಯವರು ಸಂಪಾದಿಸಿದ್ದಾರೆ. ಸಮಾಜಕಾರ್ಯವನ್ನು ನಾವು ನಿತ್ಯ ಬದುಕಿನಲ್ಲಿ ಮಾಡುತ್ತಲೇ ಇರುತ್ತೇವೆ. ನಮ್ಮ ಕುಟುಂಬದಲ್ಲೂ ಒಬ್ಬರ ತ್ಯಾಗದಿಂದ ಎಲ್ಲರಿಗೂ ಸುಖವಾಗುತ್ತಿರುತ್ತದೆ. ಸಮಾಜಕ್ಕೆ ನಾವೇನಾದರು ಮಾಡಿದಾಗ ನಾನು ಮಾಡಿದೆ ಎನ್ನುವುದಕ್ಕಿಂತ ಸಮಾಜದಿಂದ ನಾವು ಎಷ್ಟೋ ಪಡೆದಿರುತ್ತೇವೆ, ಅದಕ್ಕಾಗಿ ನಾವು ಸಮಾಜದ ಋಣ ತೀರಿಸಿದೆ ಎಂದು ಹೇಳುವುದೇ ಸೂಕ್ತ. ಮನುಷ್ಯನ ವಿಕಾಸ, ಸಾಮಾಜಿಕ ಸಾಮರಸ್ಯ ಇವೆಲ್ಲವನ್ನೂ ಚೆನ್ನಾಗಿ ನೀಡಿದ ಕೃತಿ ಇದು.

ಮತ್ತೊಂದು ಕೃತಿ, ಸೂಕ್ತಿ ಸ್ತಬಕ – ಬಾಯಾರಿಕೆಯನ್ನು ನೀಗಿಸಬಹುದಾದ್ದು ಬಾವಿಯೇ ಹೊರತು ಸಮುದ್ರವಲ್ಲ ಎನ್ನುತ್ತಾರೆ ಡಾ. ಎಸ್.‌ ಆರ್.‌ ರಾಮಸ್ವಾಮಿಯವರು. ಈ ಕೃತಿಯಲ್ಲಿ ಸೂಕ್ತಿಗಳಿವೆ. ಅವುಗಳನ್ನು ಓದುಗರಿಗೆ ಮನಮುಟ್ಟುವಂತೆ ಹೇಳುವ ದೃಷ್ಟಾಂತ, ಉದಾಹರಣೆಗಳು ಇದ್ದು ಮುಂಜಾನೆಯೇ ಇದರಲ್ಲಿ ಒಂದು ಸೂಕ್ತಿ ಓದಿದರೂ ಮನಸ್ಸು ಉಲ್ಲಾಸಗೊಳ್ಳುತ್ತದೆ. ಎಲ್ಲ ಕಡೆಯೂ ಬಳಸಬಹುದಾದ ಸೂಕ್ತಿಗಳಿದ್ದು ಓದಲೇಬೇಕಾದ ಕೃತಿ ಇದು.

ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ ಕೃತಿಯು ಅಮೆರಿಕ ಬೆಳೆದುಬಂದ ಬಗೆಯನ್ನು ಹೇಳುವ ಕೃತಿ. ಮೂಲನಿವಾಸಿಗಳನ್ನು ಅಲ್ಲಿಂದ ಹೇಗೆ ಧ್ವಂಸ ಮಾಡಲಾಯಿತು ಎನ್ನುವ ಮಾಹಿತಿ ನೀಡುತ್ತದೆ ಎಂದು ನಾಲ್ಕು ಕೃತಿಗಳನ್ನು ಪರಿಚಯಿಸಿದರು.

ಇಂಗ್ಲಿಷ್‌ನ ನಾಲ್ಕು ಕೃತಿಗಳನ್ನು ಪರಿಚಯಿಸುತ್ತ ಶ್ರೀ ಹರಿ ರವಿಕುಮಾರ್‌ ಅವರು ಭಾರತೀಯರಲ್ಲಿ ಆಗ ಹುಟ್ಟಿಸಿದ ಕೀಳರಿಮೆಯೇ ಈಗಲೂ ಮುಂದುವರಿದಿದೆ. ದಾಳಿಕೋರರನ್ನು ವೈಭವೀಕರಿಸಿದ ಇತಿಹಾಸ ನಮ್ಮದು. 7-8ನೇ ಶತಮಾನದಲ್ಲೂ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿದೆ. ಶ್ರೀಮತಿ ಶ್ರೀಪ್ರಿಯಾ ಅವರು ಬರೆದ ಪಲ್ಲವ ಎಂಪಾಯರ್‌ ಆಕರ ಗಂಭೀರವಾಗಿದ್ದರೂ ಬರೆದದ್ದು ಸರಳವಾದ ಭಾಷೆಯಲ್ಲಿದೆ. ಈ ಕೃತಿಯನ್ನು ಹೈಸ್ಕೂಲ್‌ ವಿದ್ಯಾರ್ಥಿಗಳೂ ಓದಬಹುದಾಗಿದೆ. ಇಕನಾಮಿಕ್‌ ಐಡಿಯಾಸ್‌ ಅಂಡ್  ಥಾಟ್ಸ್‌ ಆಫ್‌ ದಾದಾಭಾಯ್‌ ನವರೋಜಿ ಕೃತಿಯು ದಾದಾಭಾಯ್‌ ನವರೋಜಿ ಅವರ ಆರ್ಥಿಕ ಚಿಂತನೆಗಳನ್ನು ಒಳಗೊಂಡ ಕೃತಿಯಾಗಿದೆ. ಇನ್ನೊಂದು ಕೃತಿ ಎ ಲಿಟರರಿ ಲ್ಯುಮಿನರಿ ಕನ್ನಡದ ಮೂಲದವರೇ ಬರೆದ ಇಂಗ್ಲಿಷ್ ಕೃತಿಯಾಗಿದ್ದು, ವೆಸ್ಟ್‌ – ಈಸ್ಟ್‌, ಎರಡೂ ಟೂಲ್‌ ಬಳಸಿ ಬರೆದ ವಿಮರ್ಶೆಯಾಗಿದ್ದು, ಭೈರಪ್ಪನವರ ಕೃತಿಗಳನ್ನು ಓದಲಿಕ್ಕೆ ಇದು ದಾರಿದೀಪದಂತಿದೆ ಎಂದರು.

ಲೇಖಕರಾದ ಶ್ರೀ ಅಜ್ಜಂಪುರ ಮಂಜುನಾಥ್ ಅವರು ಬ್ರಿಟಿಷರು ನಮ್ಮ ಕೃಷಿ, ಉದ್ದಿಮೆ, ಶಿಕ್ಷಣ ಎಲ್ಲವನ್ನೂ ನಾಶಮಾಡಿದರು. ಅದ್ಭುತವಾದ ದೇಶ ದಾರಿದ್ರ್ಯದ ದೇಶವಾಯ್ತು. ಅಮೆರಿಕದ ಹತ್ಯಾಕಾಂಡ ಭಿಕರವಾಗಿದ್ದು, 13-14ರ ಸಮಯದಲ್ಲಿ 2 ರಿಂದ 3 ಶತಮಾನಗಳ ಕಾಲ ನಡೆದ ಆ ಇತಿಹಾಸವನ್ನು ಬರೆಯುವುದಕ್ಕೆ 200 ಪುಟಗಳು ಸಾಲದು. ಸನಾತನ ಧರ್ಮ ಇಂತಹ ಹತ್ಯಾಕಾಂಡವನ್ನು ತಡೆಯುವುದಕ್ಕೆ ಏನು ಹೇಳುತ್ತದೆ ಎನ್ನುವುದನ್ನೂಇಲ್ಲಿ ದಾಖಲಿಸಿದ್ದೇನೆ. ನಮ್ಮ ಕೃತಿಗಳನ್ನು ಇಂಗ್ಲಿಷಿನಲ್ಲಿ ಬರೆಯುವ ಅನಿವಾರ್ಯತೆ ಉಂಟಾಗಿದೆ ಎಂದರು.

ಶ್ರೀಮತಿ ಸುಮಾ ದ್ವಾರಕಾನಾಥ್‌ ಅವರು 10 ವರ್ಷಗಳ ನಂತರ ಈ ಕೃತಿ ಹೊರಬರುತ್ತಿದ್ದು, ಶೃಂಗೇರಿ ಗುರುಗಳ ಕೃಪಾಶೀರ್ವಾದ ಇದಕ್ಕಿದೆ ಎಂದರು. ಎ ಲಿಟರರಿ ಲ್ಯುಮಿನರಿ ಬಗ್ಗೆ ಹೇಳುತ್ತ ಪ್ರೊ. ಎಂ. ಜಿ. ವೇದವ್ಯಾಸ್‌ ಅವರು ಈ ಕೃತಿಯು ಭೈರಪ್ಪನವರ ಕೃತಿಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ನೋಡುತ್ತದೆ. ಅವರ ಕೃತಿಗಳನ್ನು ಹೇಗೆ ಓದಬೇಕು ಎಂದು ಹೇಳುವ ಕೃತಿ ಇದಾಗಿದೆ ಎಂದರು.

ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಅಜಕ್ಕಳ ಗಿರೀಶ್‌ ಭಟ್‌ ಅವರು ಒಳ್ಳೆಯ ವಿಷಯ ನೋಡಿದರೆ ಹಿತಾನುಭವ ಉಂಟಾಗುತ್ತದೆ. ಭಾರತೀಯ ಸಂಸ್ಕೃತಿ ಎಂತಹ ಸನ್ನಿವೇಶದಲ್ಲೂ ಉಳಿಯಲು ಕಾರಣ ಅದು ಜ್ಞಾನಕ್ಕೆ ಕೊಟ್ಟ ಮಹತ್ತ್ವ. ವೇದ ಪುರಾಣ, ಸಾಹಿತ್ಯ, ಸಾಮಾನ್ಯ ಜನಜೀವನ ಇದೆಲ್ಲದರಲ್ಲೂ ಒಂದು ಸಾಮಾನ್ಯ ಅಂಶವಿದೆ. ಒಂದು ಇನ್ನೊಂದಕ್ಕೆ ವಿರೋಧವಾಗಿಲ್ಲ. ವೈದಿಕ – ಅವೈದಿಕ ಇವುಗಳ ನಡುವೆ ವಿರೋಧವಿಲ್ಲ. ಇಸ್ಲಾಂ ಆಡಳಿತ, ಇಂಗ್ಲಿಷ್‌ ಶಿಕ್ಷಣ ಯಾವುದರಿಂದಲೂ ನಮ್ಮ ಬೇರು ನಾಶವಾಗದೇ ಅದು ಪುನರುತ್ಥಾನವಾಗಿದೆ.

ಇನ್ನೊಂದು ಕಾರಣ ತಪಸ್ಸು. ತಪಸ್ಸೆಂದರೆ ಚಿಂತನೆ. ಮೊದಲೆಲ್ಲ ಭಾರತದ ದಾಳಿಗಳಲ್ಲಿ ಸೈನಿಕರ ನಡುವೆ ಯುದ್ಧವಾಗುತ್ತಿತ್ತು. ಜನಸಾಮಾನ್ಯರ ಜೀವನದಲ್ಲಿ ವ್ಯತ್ಯಾಸವಾಗುತ್ತಿರಲಿಲ್ಲ. ಹೊರಗಿನ ದಾಳಿಯಿಂದ ಜನಸಾಮಾನ್ಯರ ಜೀವನ, ಸಂಸ್ಕೃತಿಯ ಮೇಲೆ ತೀವ್ರ ಬದಲಾವಣೆ ಆಗಿದ್ದ ಕಾರಣ ಸ್ವಾತಂತ್ರ್ಯವೆಂಬ ಪದ ಹುಟ್ಟಿಕೊಂಡಿತು. ಒಬ್ಬ ರಾಜನನ್ನು ಅರ್ಥಮಾಡಿಕೊಳ್ಳಲಿಕ್ಕೆ ಆಗಿನ ಅಭಿಪ್ರಾಯ, ಅವರ ನೀತಿ, ಧೋರಣೆ, ಇವುಗಳ ಸತ್ಪರಿಣಾಮ, ದುಷ್ಪರಿಣಾಮ ಇವೆಲ್ಲದರ ಪರಿಶೀಲನೆ ಮಾಡಿ ವಿಮರ್ಶಿಸಬೇಕಾಗುತ್ತದೆ. ಡಿಜಿಟಲ್‌ ಯುಗದಲ್ಲಿ ಇಂತಹ ಕೃತಿಗೆ ಏನು ಮಹತ್ತ್ವವಿದೆ ಎಂದರೆ ಇಂತಹ ಕೃತಿಗಳು ಸುಳ್ಳನ್ನು ಸೃಷ್ಟಿಮಾಡುವುದಿಲ್ಲ, ಅದು ಸುಲಭವೂ ಅಲ್ಲ; ಆದರೆ ರೀಲ್ಸ್‌ ಕ್ಷಣಾರ್ಧದಲ್ಲಿ ಸುಳ್ಳನ್ನು ಸೃಷ್ಟಿಸಬಲ್ಲದು ಎಂದರು. ನವೆಂಬರ್‌ 1ರಿಂದ ಡಿಸೆಂಬರ್‌ 7 ರವರೆಗೆ 37 ದಿನಗಳ ಕಾಲ ನಡೆಯುವ ಕನ್ನಡ ಪುಸ್ತಕ ಹಬ್ಬದಲ್ಲಿ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9ರ ವರೆಗೆ ʼಕೇಶವ ಶಿಲ್ಪʼ ಸಭಾಂಗಣದಲ್ಲಿ ಪುಸ್ತಕ ಪ್ರದರ್ಶನ ಮಾರಾಟ ನಡೆಯುತ್ತಲಿದ್ದು, ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟಣೆಗಳ ಜೊತೆಗೆ ಕರ್ನಾಟಕದ ಹಲವಾರು ಪ್ರಕಾಶಕರ ಪ್ರಕಟಣೆಯ ಪುಸ್ತಕಗಳೂ ವಿಶೇಷ ರಿಯಾಯತಿಯಲ್ಲಿ ದೊರಕುತ್ತಿವೆ. ಜೊತೆಗೆ ಸಂಸ್ಕಾರ ಭಾರತಿ ಸಹಯೋಗದೊಂದಿಗೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲಿದ್ದು, ಅದರಲ್ಲಿ ತಾಳವಾದ್ಯಗೋಷ್ಠಿ, ಭರತನಾಟ್ಯ, ತಾಳಮದ್ದಲೆ ಯಕ್ಷಗಾನ, ವಿವಿಧ ಪ್ರಕಾರದ ಸಂಗೀತ, ಹರಿಕಥೆ ಮೊದಲಾದ ಕಾರ್ಯಕ್ರಮಗಳು ನಡೆಯುತ್ತಲಿವೆ

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top