ಯುವ ಪೀಳಿಗೆಗೆ ಓದುವ ರುಚಿ ಹತ್ತಿಸುವ ರಾಷ್ಟ್ರೋತ್ಥಾನದ ಪ್ರಯತ್ನಕ್ಕೆ ಚಕ್ರವರ್ತಿ ಸೂಲಿಬೆಲೆ ಶ್ಲಾಘನೆ; ಪುಸ್ತಕ ಹಬ್ಬಕ್ಕೆ ನಾನು ಬರುವೆ, ನೀವೂ ಬನ್ನಿ ಎಂದ ವಾಗ್ಮಿ

ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯವು ಕಳೆದ ಹಲವು ವರ್ಷಗಳಿಂದ ರಾಷ್ಟ್ರೀಯ ಹಿತದ ಸಾಹಿತ್ಯಗಳನ್ನು ಮುದ್ರಣ ಮಾಡುತ್ತಿದೆ. ಕಳೆದ ಐದು ವರ್ಷಗಳಿಂದ ಕನ್ನಡದ ಎಲ್ಲಾ ಪುಸ್ತಕಗಳನ್ನು ಪ್ರದರ್ಶನ ಮಾಡಿ ಸಮಾಜಕ್ಕೆ ಆ ಪುಸ್ತಕಗಳನ್ನು ಮುಟ್ಟಿಸುವಂತಹ ಕೆಲಸ ಮಾಡುತ್ತಿದೆ. ಪುಸ್ತಕಗಳನ್ನು ಕೊಂಡುಕೊಳ್ಳುವಂತಹ ಸ್ಥಿತಿ ಈಗ ಕಡಿಮೆಯಾಗುತ್ತಿದೆ. ಝೆನ್‌ಜೀ ಅಂತ ನಾವು ಈಗ ಕರೆಯುತ್ತಿರುವ ತಲೆಮಾರಿಗೆ ಓದುವ ಹವ್ಯಾಸ ಕಡಿಮೆಯಾಗಿದೆ. ಅವರು ರೀಲ್ಸ್‌ ಹವ್ಯಾಸಗಳಲ್ಲಿ ಮುಳುಗಿದ್ದಾರೆ ಎನ್ನುವಾಗ ಅವರು ಕನ್ನಡ ಪುಸ್ತಕಗಳನ್ನು ಓದಿಸಬೇಕೆಂಬ ಏಕೈಕ ಉದ್ದೇಶದಿಂದ ರಾಷ್ಟ್ರೋತ್ಥಾನ ಸಾಹಿತ್ಯವು ವಿಶೇಷವಾದ ಪುಸ್ತಕ ಮೇಳವನ್ನು ಆಯೋಜಿಸುತ್ತದೆ ಎಂದು ವಾಗ್ಮಿ, ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕ ಮಳಿಗೆಗೆ ಭೇಟಿ ನೀಡಿದ ಅವರು ಕನ್ನಡ ಪುಸ್ತಕ ಹಬ್ಬದ ಕುರಿತು ಮಾಹಿತಿ ಪಡೆದು, ಶುಭ ಕೋರಿ ಮಾತನಾಡಿದರು.

ʼಈ ಬಾರಿ ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ 37 ದಿನಗಳ ಕಾಲ ಈ ಪುಸ್ತಕ ಉತ್ಸವ ನಡೆಸುತ್ತಿದೆ. ಪ್ರತಿದಿನ ಸಾಯಂಕಾಲ ವಿಶೇಷವಾದ ಸಂಗೀತ, ನೃತ್ಯ ಕಾರ್ಯಕ್ರಮಗಳು ಇರುತ್ತವೆ. ಒಟ್ಟಾರೆ ಇದೊಂದು ಹಬ್ಬವೆಂದು ರಾಷ್ಟ್ರೋತ್ಥಾನದವರು ಕರೆದಿರುವುದು ಅರ್ಥಪೂರ್ಣವಾಗಿದೆ. ಪುಸ್ತಕವನ್ನು ಮುಟ್ಟುವುದು, ಕೊಳ್ಳುವುದು, ಓದುವುದು ನಿಜಕ್ಕೂ ಹಬ್ಬ. ಸಾಹಿತ್ಯದ ಜತೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇವೆ. ಹೀಗಾಗಿ ಇದೊಂದು ಒಳ್ಳೆಯ ಅವಕಾಶ. ಬೆಂಗಳೂರಿನಲ್ಲಿರುವವರು ಭಾಗ್ಯವಂತರು ಪ್ರತಿದಿನ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದು. ಬೆಂಗಳೂರಿನ ಹೊರಗೆ ಇರುವವರೂ ಬನ್ನಿ, ನಾನು ಪುಸ್ತಕ ಹಬ್ಬಕ್ಕೆ ಬರುವೆ, ನೀವೂ ಬನ್ನಿ- ಎಂದು ಚಕ್ರವರ್ತಿ ಸೂಲಿಬೆಲೆ ಬೆಂಗಳೂರಿಗರನ್ನು ಸ್ವಾಗತಿಸಿದರು.

ಇದೇ ಸಂದರ್ಭ ಸೂಲಿಬೆಲೆ ಅವರಿಗೆ ರಾಷ್ಟ್ರೋತ್ಥಾನ ಸಾಹಿತ್ಯದ ಹಿರಿಯ ವ್ಯವಸ್ಥಾಪಕ ಉಮೇಶ್‌ ಕುಮಾರ್‌ ಅವರು ಕನ್ನಡ ಪುಸ್ತಕ ಹಬ್ಬದ ಆಮಂತ್ರಣ ಪತ್ರ ನೀಡಿ ಸ್ವಾಗತಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top