ಮಕ್ಕಳನ್ನು ಸರಿದಾರಿಗೆ ತರಲು ಇಂತಹ ಕಾರ್ಯಕ್ರಮಗಳಿಗೆ ಕರೆತನ್ನಿ; ಕನ್ನಡ ಪುಸ್ತಕ ಹಬ್ಬದ ಕುರಿತು ಡಾ. ಜಿ ಬಿ ಹರೀಶ‌ ಮೆಚ್ಚುಗೆ

ಕನ್ನಡ ಪುಸ್ತಕ ಹಬ್ಬ

ಬೆಂಗಳೂರು, ನವೆಂಬರ್‌ 7: ಯಾವ ಸಮಾಜ ಪುಸ್ತಕಗಳು, ಸಂಗೀತ, ಸಾಂಸ್ಕೃತಿಕ ಅಂಶಗಳ ನಡುವೆ ಬೆಳೆಯುತ್ತದೆಯೋ ಅಂತಹ ಸಮಾಜಕ್ಕೆ ಒಳ್ಳೆಯ ಭವಿಷ್ಯ ಇರುತ್ತದೆ. ಈಗಾಗಲೇ ನಮ್ಮ ಸಮಾಜದ ಭವಿಷ್ಯ ಬೇರೆ ದಿಕ್ಕಿನತ್ತ ಸಾಗುತ್ತಿದೆ. ಒಂದು ನಿಮಿಷದ, ಅರ್ಧ ನಿಮಿಷದ ರೀಲ್ಸ್‌ಗಳು, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಇತ್ಯಾದಿಗಳಿಂದ ಸಮಾಜ ಬೇರೆ ಕಡೆ ಹೋಗುತ್ತಿದೆ. ಕೆಲವೊಂದು ವಿಷಯಗಳು ವ್ಯಸನಕಾರಿಯಾಗಿವೆ. ಇಂತಹ ಸಮಯದಲ್ಲಿ ಒಳ್ಳೆಯ ದಾರಿಯತ್ತ ಮಕ್ಕಳನ್ನು ಕರೆದುಕೊಂಡು ಹೋಗಲು ಇಂತಹ ಪುಸ್ತಕ ಹಬ್ಬಗಳು ಹೆಚ್ಚಾಗಬೇಕು. ರಾಷ್ಟ್ರೋತ್ಥಾನದವರು ಈ ನಿಟ್ಟಿನಲ್ಲಿ ಒಳ್ಳೆಯ, ಸಾರ್ಥಕವಾದ ಕೆಲಸ ಮಾಡುತ್ತಿದ್ದಾರೆ ಎಂದು ಸಂಸ್ಕೃತಿ ಚಿಂತಕರು, ಲೇಖಕರಾದ ಶ್ರೀ. ಡಾ. ಜಿ.ಬಿ. ಹರೀಶ ಅಭಿಪ್ರಾಯಪಟ್ಟಿದ್ದಾರೆ. ಅವರು ಬೆಂಗಳೂರಿನ ಕೆಂಪೇಗೌಡ ನಗರದ ಕೇಶವಶಿಲ್ಪದಲ್ಲಿ ನಡೆಯುತ್ತಿರುವ 5ನೇ ಪುಸ್ತಕ ಹಬ್ಬಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

ʼರಾಷ್ಟ್ರೋತ್ಥಾನವು ಕರ್ನಾಟಕದಲ್ಲಿ ಪ್ರಸಿದ್ಧವಾದ 50 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸವಿರುವ, ತುಂಬಾ ಅಪರೂಪವಾದ ಪುಸ್ತಕಗಳನ್ನು ಪ್ರಕಟ ಮಾಡುತ್ತಿರುವ ಒಂದು ಸಂಸ್ಥೆ. ಇಲ್ಲಿ ಕಳೆದ ಐದು ವರ್ಷಗಳಿಂದ ಪುಸ್ತಕ ಹಬ್ಬವನ್ನು ನಡೆಸುತ್ತಿದ್ದಾರೆ. ಈ ಹಬ್ಬಕ್ಕೆ ನಾನು ಪ್ರತಿವರ್ಷವೂ ಬರುತ್ತಿದ್ದೇನೆ. 37 ದಿನಗಳ ಕಾಲ ಈ ಹಬ್ಬವನ್ನು ನಡೆಸುತ್ತಾ ಇದ್ದಾರೆ. ಇಲ್ಲಿಯ ವಿಶೇಷ ಏನೆಂದರೆ, ಬೇರೆ ಕಡೆ ಸಿಗುವ ಪುಸ್ತಕಗಳ ಜತೆಗೆ ದೇಶಕ್ಕೆ ಸಂಬಂಧಿಸಿದ್ದು, ಪ್ರಕೃತಿಗೆ ಸಂಬಂಧಿಸಿದ್ದು, ಜಿಯೋ ಪಾಲಿಟಿಕ್ಸ್‌ ಎಂದು ಕರೆಯಲ್ಪಡುವ ಭೂರಾಜಕಾರಣ, ರಾಷ್ಟ್ರೀಯತೆ, ಅದಕ್ಕೆ ಸಂಬಂಧಪಟ್ಟ ಪುಸ್ತಕಗಳು ವಿಶೇಷವಾಗಿ ಸಿಗುತ್ತೆʼ ಎಂದು ಅವರು ಹೇಳಿದರು.

ʼರಾಷ್ಟ್ರೋತ್ಥಾನ ಸಾಹಿತ್ಯವೇ ಪ್ರಕಟಿಸಿರುವ ಮಕ್ಕಳ ಪುಸ್ತಕ ಭಾರತ ಭಾರತಿ ಸಂಪುಟ, ಅದೇ ರೀತಿ ತತ್ಸಮಾನವಾದ ಪುಸ್ತಕಗಳು ಇಲ್ಲಿವೆ. ವಿಶಾಲವಾದ ಸಭಾಂಗಣದಲ್ಲಿ ಈ ಹಬ್ಬ ಮಾಡಿದ್ದಾರೆ. ನೋಡಲು ಯಾವುದೇ ಇಕ್ಕಟ್ಟು ಇಲ್ಲ. ಮಧ್ಯದಲ್ಲಿ ಆಸನದ ವ್ಯವಸ್ಥೆ ಇದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಸಾಮಾನ್ಯವಾಗಿ ನವೆಂಬರ್‌ 30ರೊಳಗೆ ಇಂತಹ ಕಾರ್ಯಕ್ರಮಗಳು ಮುಗಿಯುತ್ತವೆ. ನವೆಂಬರ್‌ ಮುಗಿಯುತ್ತಿದ್ದಂತೆ ಕನ್ನಡದ ವಿಷಯ ಬಿಟ್ಟು ಬೇರೆ ವಿಷಯದತ್ತ ಎಲ್ಲರೂ ಹೋಗುತ್ತಾರೆ. ಆದರೆ, ಇಲ್ಲಿ ಡಿಸೆಂಬರ್‌ಗೂ ಈ ಕನ್ನಡ ಕಾರ್ಯಕ್ರಮಗಳು ಮುಂದುವರೆಯುತ್ತವೆ. ಇದು ಇಲ್ಲಿನ ಪ್ರಮುಖ ವಿಶೇಷ ಎನ್ನಬಹುದು. ಇದರೊಂದಿಗೆ ಯಾವುದೇ ರೀತಿಯ ವಿಚಾರ ಬೇಧವಿಲ್ಲದೆ ಎಲ್ಲಾ ರೀತಿಯ ಒಳ್ಳೆಯ ಸಾಹಿತ್ಯ ಇಲ್ಲಿ ದೊರಕುತ್ತದೆ. ಕೇವಲ ರಾಷ್ಟ್ರೋತ್ಥಾನ ಪ್ರಕಾಶನದ್ದು ಎಂದಲ್ಲ, ಎಲ್ಲಾ ಪ್ರಕಾಶನಗಳ ಪುಸ್ತಕಗಳು ಇಲ್ಲಿ ದೊರಕುತ್ತವೆ. ರಾಷ್ಟ್ರೋತ್ಥಾನದವರು ತುಂಬಾ ಒಳ್ಳೆಯ ಸಾರ್ಥಕವಾದ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಬನ್ನಿ, ಪೋಷಕರು ತಮ್ಮ ಮಕ್ಕಳೊಂದಿಗೆ ಬನ್ನಿʼ ಎಂದು ಡಾ. ಜಿ ಬಿ ಹರೀಶ‌ ಹೇಳಿದರು.

ಕನ್ನಡ ಪುಸ್ತಕ ಹಬ್ಬದ ಕುರಿತು ಹೆಚ್ಚಿನ ಮಾಹಿತಿ ಪಡೆಯಿರಿ

ಪುಸ್ತಕ ಹಬ್ಬದಲ್ಲಿ ನಡೆಯುವ ಕಾರ್ಯಕ್ರಮಗಳ ಕ್ಯಾಲೆಂಡರ್‌

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top