ಪುಸ್ತಕ ಪರಿಚಯ: ಧ್ರುವಜಲ – ಸಂಸ್ಕೃತಿ-ಚಿಂತನ ಪ್ರಬಂಧಗಳು

ಪುಸ್ತಕದ ಹೆಸರು: ಧ್ರುವಜಲ – ಸಂಸ್ಕೃತಿ-ಚಿಂತನ ಪ್ರಬಂಧಗಳು

ಲೇಖಕರು: ಎಸ್. ಆರ್. ರಾಮಸ್ವಾಮಿ


ಸಂಸ್ಕೃತಿಯನ್ನು ಪ್ರಮುಖವಾಗಿ ಧಾರ್ಮಿಕ-ತತ್ತ್ವಶಾಸ್ತ್ರೀಯ ಭೂಮಿಕೆಯಿಂದ ದರ್ಶಿಸುವ ರೂಢಿ ಇದೆ. ಅದರಿಂದ ಕಿಂಚಿದ್ ಭಿನ್ನವಾಗಿ, ಪ್ರಮುಖವಾಗಿ ಚಾರಿತ್ರಿಕ-ಸಾಮಾಜಿಕ ನೆಲೆಯಿಂದ ಅವಲೋಕಿಸಿದಾಗ ಕಾಣುವ ಸಂಸ್ಕೃತಿ ಸ್ವರೂಪದ ಹಲವು ಮಗ್ಗುಲುಗಳಿಗೆ ಗಮನ ಸೆಳೆಯುವ ಉದ್ದೇಶವನ್ನುಳ್ಳವು ಈ ಗ್ರಂಥದಲ್ಲಿನ ಪ್ರಬಂಧಗಳು.

ಆರೋಗ್ಯಕರ ಮಾನಸಿಕ ಸ್ಥಿತಿ ಉಳ್ಳವರಿಗೆ ಸುತ್ತಲೂ ದೃಷ್ಟಿ ಹಾಯಿಸಿದಾಗ ಅಭಿಮಾನಾಸ್ಪದ ಸಂಗತಿಗಳೇ ಕಾಣುತ್ತವೆ. ಆರ್ಥಿಕ ಸಂಪನ್ನತೆಯಲ್ಲಿಯೊ ತಂತ್ರಜ್ಞಾನ ಸಾಧನೆಯಲ್ಲಿಯೊ ಒಂದೊಮ್ಮೆ ಬೇರೆ ಯಾವುದಾದರೂ ರಾಷ್ಟ್ರ ಭಾರತವನ್ನು ಹಿಂದೆ ಹಾಕಬಹುದು. ಆದರೆ ಸೇವಾ ಮನೋಭಾವ, ತ್ಯಾಗಗುಣ, ಆಧ್ಯಾತ್ಮ ವಿಚಾರ ಮೊದಲಾದ ಉದಾತ್ತ ಗುಣಸಮುಚ್ಚಯವನ್ನು ಭಾರತದಲ್ಲಿ ಕಾಣುವಷ್ಟು ನಿಚ್ಚಳವಾಗಿ ಬೇರೆಡೆ ಕಾಣಲಾಗದು. ಭಾರತದ ನವೀಕರಣ ಸಾಮರ್ಥ್ಯದ ಮೂಲವೂ ಈ ಅತಿಶಯ ಗುಣಗಳೇ. ಈ ಅನನ್ಯ ಸಂಸ್ಕೃತಿಯ ಅಭಿವ್ಯಕ್ತಿಯ ಹಲವು ಸ್ಪುರಣಗಳತ್ತ ಬೆರಳು ಚಾಚಿ ತೋರಿಸುವ ಆಶಯದ ಪ್ರಬಂಧಗಳ ಸಂಕಲನ – ‘ಧ್ರುವಜಲ’.

ಭಾರತೀಯ ಸಂಸ್ಕೃತಿಯ ಸ್ವರೂಪಸಾತತ್ಯ, ಅದನ್ನು ಅನನ್ಯವಾಗಿಸಿರುವ ಅಂಶಗಳು, ಅದರ ಸೈದ್ಧಾಂತಿಕ ಮತ್ತು ಆನ್ವಯಿಕ ಆಯಾಮಗಳು, ಸಂಸ್ಕೃತಿ-ನಾಗರಿಕತೆಗಳ ನಡುವಣ ಸಂಬಂಧ, ವೈಚಾರಿಕತೆ-ಭಾವನಾತ್ಮಕತೆಗಳ ನಡುವಣ ಪಾರಸ್ಪರಿಕತೆ, ವ್ಯಕ್ತಿ-ಸಮಾಜ-ರಾಷ್ಟ್ರ ತ್ರಿಪುಟಿ, ಸಾರ್ಥಕ ಅಭ್ಯುದಯದ ಅಧಿಷ್ಠಾನ, ಅಧ್ಯಾತ್ಮ ದೃಷ್ಟಿ ಮತ್ತು ಲೌಕಿಕದಕ್ಷತೆಗಳ ನಡುವಣ ಸಮನ್ವಯ, ಸಾಮಾಜಿಕ ವ್ಯವಸ್ಥೆ ನಡೆದುಬಂದಿರುವ ದಾರಿ, ಭಾರತೀಯ ಸಂಸ್ಕೃತಿಯಲ್ಲಿ ಅಂತರ್ನಿಹಿತವಾದ ನವೀಕರಣಸಾಮರ್ಥ್ಯ, ಸೌಂದರ್ಯಾನುಸಂಧಾನ, ಪ್ರಚಲಿತ ಜಗತ್‌ ಸನ್ನಿವೇಶದ ಮತ್ತು ಭಾರತೀಯ ಸಂಸ್ಕೃತಿಯ ಅಭಿಮುಖ್ಯ: – ಇವೇ ಮೊದಲಾದ ವಿಷಯಗಳನ್ನು ಕುರಿತ ಚಿಂತನೆಯನ್ನೊಳಗೊಂಡ ಕೆಲವು ಪ್ರಬಂಧಗಳ ಮತ್ತು ಸಾಂದರ್ಭಿಕ ಭಾಷಣಗಳ ಸಂಕಲನ ಈ ಕೃತಿ. ಕೆಲವು ಗ್ರಂಥಗಳಿಗಾಗಿ ಬರೆದ ಪ್ರಸ್ತಾವನೆಗಳೂ ಕೆಲವು ಪತ್ರಿಕೆಗಳಿಗಾಗಿ ಬರೆದ ವಿಶೇಷ ಲೇಖನಗಳೂ ಇಲ್ಲಿ ಸೇರಿವೆ. ಬೇರೆಬೇರೆ ಕಡೆಗಳಲ್ಲಿ ಹರಡಿದ್ದ ಈ ಸಂಸ್ಕೃತಿ-ಚಿಂತನ ಬರಹಗಳು ಒಂದೆಡೆ ಅಡಕವಾಗಿ ಲಭ್ಯವಾದರೆ ಅನುಕೂಲವೆಂಬ ಅನಿಸಿಕೆಯನ್ನು ಹಲವಾರು ಆಸಕ್ತರು ವ್ಯಕ್ತಪಡಿಸಿರುವುದುಂಟು. ಆ ಅಪೇಕ್ಷೆಯನ್ನು ಸ್ವಲ್ಪ ಮಟ್ಟಿಗೆ ಪೂರೈಸುವುದು ಪ್ರಕೃತಗ್ರಂಥದ ಆಶಯ.

ಧ್ರುವಜಲ – ಸಂಸ್ಕೃತಿ-ಚಿಂತನ ಪ್ರಬಂಧಗಳು ಪುಸ್ತಕ ರಾಷ್ಟ್ರೋತ್ಥಾನ ಸಾಹಿತ್ಯ ವೆಬ್‌ಸೈಟ್‌ನಲ್ಲಿದೆ. ಪುಸ್ತಕ ಖರೀದಿಸಲು ಲಿಂಕ್‌ ಇಲ್ಲಿದೆ

ಕನ್ನಡ ಪುಸ್ತಕ ಹಬ್ಬದ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಕರ್ನಾಟಕ ಪುಸ್ತಕ ಹಬ್ಬ ವೆಬ್‌ಸೈಟ್‌ಗೆ ನಿರಂತರವಾಗಿ ಭೇಟಿ ನೀಡಿ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top