ಕನ್ನಡ ಪುಸ್ತಕ ಹಬ್ಬ 2022 – ರಾಳ್ಳಪಲ್ಲಿ ಅನಂತಕೃಷ್ಣ ಶರ್ಮರ ಪುಸ್ತಕಗಳ ಪರಿಚಯ

ಬೆಂಗಳೂರು, ನ.20: ಕಲೆ, ರಸಜ್ಞಾನಕ್ಕೆ ಅವಕಾಶವಿಲ್ಲದ ಯಾವುದೇ ಶಿಕ್ಷಣ ನೀತಿಗಳೂ ಸ್ವಾಗತಾರ್ಹವಲ್ಲ. ರಸಾನಂದಕ್ಕೆ ತೆರೆದುಕೊಳ್ಳದಿರುವ ಮನೋವೃತ್ತಿ ಈಗಿನ ಪ್ರಪಂಚದ ಗೊಂದಲಕ್ಕೆ ಮೂಲಕಾರಣ. ಈ ಹಿನ್ನೆಲೆಯಲ್ಲಿ ರಾಳ್ಳಪಲ್ಲಿ ಅನಂತಕೃಷ್ಣ ಶರ್ಮರಂಹ ಮಹಾನ್ ದಾರ್ಶನಿಕ, ಸಂಗೀತ-ಸಾಹಿತ್ಯ ವಿಶಾರದರು ಹಾಕಿಕೊಟ್ಟ ಹೆಜ್ಜೆಗಳು ಮಹತ್ತರವಾದುದು ಎಂದು ಬಹುಶ್ರುತ ವಿದ್ವಾಂಸ, ಲೇಖಕ, ಶತಾವಧಾನಿ ಡಾ. ರಾ.ಗಣೇಶ್ ತಿಳಿಸಿದರು.

ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ತು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಹಬ್ಬ-2022 ಸಮಾರಂಭದ ಅಂಗವಾಗಿ ಮೂರನೇ ವಾರಾಂತ್ಯ ಶನಿವಾರ ಸಂಜೆ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ರಾಳ್ಳಪಲ್ಲಿ ಅನಂತಕೃಷ್ಣ ಶರ್ಮರ ‘ಗಾನಕಲೆ’ ಹಾಗೂ ‘ಸಾಹಿತ್ಯ ಮತ್ತು ಜೀವನಕಲೆ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಸ್ಫಟಿಕ-ಸ್ವಚ್ಛ ಭಾಷಾಶುದ್ದಿ, ಭಾವ ಪಾರದರ್ಶಕತೆಯ ಮೂಲಕ ವಾಙ್ಮಯ ಕಾವ್ಯ ಪ್ರಪಂಚಕ್ಕೆ ನೂತನ ಆವರಣವೊಂದನ್ನು ನಿರ್ಮಿಸಿದ ಅನಂತಕೃಷ್ಣ ಶರ್ಮರ ಬದುಕು-ಬರಹಗಳು ರೋಚಕವಾದುದಾಗಿತ್ತು. ಧೀರ ಮನೋಧರ್ಮದ ಅವರ ಬರಹದಲ್ಲಿ ಗಾನಪ್ರಪಂಚದ ವಿಶಾಲತೆಗೆ ನಿಖರತೆಯ ಛಾಪು ನೀಡಲ್ಪಟ್ಟಿತು ಎಂದು ತಿಳಿಸಿದರು. ವಾಸ್ತವವಾದದ ವಿರುದ್ದವಾದ ಅಂತರಂಗ ಕೇಂದ್ರಿತ ಸಂಗೀತ ಭಾಷೆಯೊಂದನ್ನು ತೋರಿಸಿಕೊಟ್ಟ ರಾಳ್ಳಪಲ್ಲಿ ಅವರನ್ನು ಆಧುನಿಕ ಸಮಾಜ ಅದರಲ್ಲೂ ಕನ್ನಡದ ಸಾಂಸ್ಕಂತಿಕ ಲೋಕ ಮರೆತಂತಿದೆ ಎಂದು ಅವರು ಈ ಸಂದರ್ಭ ವಿಶಾದ ವ್ಯಕ್ತಪಡಿಸಿದರು. ಕಲೆಯ ವಿಜೃಂಭಣೆಯ ಇಂದಿನ ಕಾಲದಲ್ಲಿ ನೆನಪಿಸಲೇಬೇಕಾದ ಮೂಲ ತತ್ವ-ಸತ್ವಗಳನ್ನು ನೆನಪಿಸುವ ರಾಳ್ಳಪಲ್ಲಿಯವರ ಸಂದೇಶಗಳನ್ನು ನಾವು ಮರೆಯುವಂತಿಲ್ಲ. ಸಾಹಿತ್ಯದ ಜೀವಾಳ ಮಧ್ಯಲಯವೇ ಹೊರತು ಅದರಾಚೆಗಿನ ಬೇರೊಂದಲ್ಲ ಎಂದು ಬಹಳ ಹಿಂದೇಯೇ ರಾಳ್ಳಪಲ್ಲಿಯವರು ಸಾರಿದ್ದರು ಎಂದು ರಾ.ಗಣೇಶ್ ಈ ಸಂದರ್ಭ ನೆನಪಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top