ಕಲಾಗಂಗೋತ್ರಿ ಮೈಸೂರು ಮಲ್ಲಿಗೆ ನಾಟಕ: ನಟನೆ-ಸಂಗೀತ-ನೃತ್ಯ ಸಮ್ಮಿಶ್ರವಾಗಿರುವ ಕಲೆಯನ್ನು ಒಂದು ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಸೌಭಾಗ್ಯ ದೊರೆತಾಗ ಯಾರು ತಾನೇ ಮಿಸ್ ಮಾಡಿಕೊಳ್ಳುತ್ತಾರೆ!! ಬಾಲ್ಯದಿಂದ ನಾಟಕ ನಿರ್ದೇಶನದಲ್ಲಿ ಆಸಕ್ತಿಯಿದ್ದ ನನಗೆ ರಂಗಭೂಮಿಯಲ್ಲಿ ಪರಿಣಿತಿಯನ್ನು ಪಡೆದವರ ನಾಟಕ ನೋಡುವ ಅದೃಷ್ಟ ಸಿಕ್ಕಿರಲಿಲ್ಲ. ಕಾಸರಗೋಡಿನವಳಾಗಿ ಜಾತ್ರೆಯ ಗದ್ದೆಯಲ್ಲಿ ತುಳು ನಾಟಕವನ್ನು ನೋಡಿದ ನೆನಪುಗಳಿತ್ತೇ ವಿನಃ ಹೆಸರಾಂತ ತಂಡದ ನಾಟಕ ಪ್ರದರ್ಶನವನ್ನು ನೋಡಿರಲಿಲ್ಲ. ಫೈನಲೀ ಆ ಅದೃಷ್ಟ ಸಿಕ್ಕೇ ಬಿಡ್ತು! ಮನೆ ಹತ್ತಿರದಲ್ಲಿರುವ ರಾಷ್ಟ್ರೋತ್ಥಾನ ಪರಿಷತಲ್ಲಿ ನಡೆಯುತ್ತಿರುವ 37 ದಿನಗಳ ಸಾಹಿತ್ಯ-ಸಾಂಸ್ಕೃತಿಕ ಉತ್ಸವದಲ್ಲಿ ನಿನ್ನೆ “ಮೈಸೂರು ಮಲ್ಲಿಗೆ” ನಾಟಕವನ್ನು ನೋಡಿದೆ.
“ಮೈಸೂರ ಮಲ್ಲಿಗೆಯನ್ನು ತಂಗಾಳಿಗೊಡ್ಡಿದ ನರಸಿಂಹಸ್ವಾಮಿಯವರ ಪ್ರತಿಭೆ ಅಪ್ಸರೆಯಂತೆ, ಈ ಲಾವಣ್ಯವು ಮಣ್ಣು ನೆಲದಿಂದ ಬಂದುದಲ್ಲ ಎನಿಸಿಬಿಟ್ಟಿದೆ” ವರಕವಿ ಬೇಂದ್ರೆಯವರು ಹೇಳಿದ ಮಾತು ಈ ನಾಟಕ ನೋಡಿದ ನಂತರ ಹೌದು ಅನ್ನಿಸುದಕ್ಕೆ ಶುರುವಾಗಿದ್ದಂತೂ ಸತ್ಯ.
ನರಹಳ್ಳಿ ಬಾಲಸುಬ್ರಮಣ್ಯ ಅವರು ಮೈಸೂರು ಮಲ್ಲಿಗೆ ಯನ್ನು “ಮಧ್ಯಮ ವರ್ಗದ ಜೀವನದ ಮಹಾಕಾವ್ಯ” ಅಂತ ಬಣ್ಣಿಸಿದ್ರು.
ಈ ನಾಟಕ ನೋಡಿದ ಮೇಲೆ ಇದು 350ಕ್ಕೂ ಹೆಚ್ಚು ಪ್ರದರ್ಶನಗೊಂಡಿದ್ದು ತುಂಬಾ ಕಡಿಮೆ ಅನ್ನಿಸಿತು. ಸಾಮಾನ್ಯ ವರ್ಗದ ಜೀವನವನ್ನು ತುಂಬಾ ಸೂಕ್ಷ್ಮವಾಗಿ ಪ್ರೇಕ್ಷಕನ ಮುಂದೆ ಇರಿಸಿದ ಪರಿಣಿತಿ ಇನ್ನೂ ದಶಕಗಳವರೆಗೆ ಈ ನಾಟಕ ಯಾವುದೇ ಸಮಸ್ಯೆಯಿಲ್ಲದೇ ಪ್ರದರ್ಶನಕ್ಕೆ ಯೋಗ್ಯ ಅನ್ನಿಸಿತು. ಪ್ರಪಂಚದಲ್ಲಾಗುತ್ತಿರುವ ಬದಲಾವಣೆಗಳನ್ನು ಅದ್ಭುತವಾಗಿ ತೋರಿಸುವಲ್ಲಿ ನಿರ್ದೇಶಕ ಬಿ ವಿ ರಾಜಾರಾಂ ಸರಿ ಸಾಟಿಯೇ ಇಲ್ಲ.
…. ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪನೆಯೇ ದೊರೆಯೇ?
ಸೂತ್ರಧಾರನಾಗಿ ವೇದಿಕೆಯುದ್ದಕ್ಕೂ ನಡೆದಾಡಿದ ಬಳೆಗಾರನ ಪಾತ್ರಧಾರಿ ಫಸ್ಟ್ ಇಂಪ್ರೆಶನಲ್ಲೇ ನನ್ನ ಮನಸ್ಸನ್ನು ಗೆದ್ದೇ ಬಿಟ್ಟರು. ಗಂಭೀರವಾದ ವಿಷಯವನ್ನು ಹಾಸ್ಯದ ಜೊತೆ ಸಮ್ಮಿಶ್ರಗೊಳಿಸಿದ ರೀತಿ ಶ್ಲಾಘನೀಯ. ಕಾಲಕ್ಕೆ ತಕ್ಕಂತೆ ಕೋಲ ಕಟ್ಟುವ ಸಮಯದಲ್ಲಿ ಕಟ್ಟುವ ಕೋಲದಲ್ಲಿ ನಾವು ಕಳೆದುಕೊಳ್ಳುವುತ್ತಿರುವುದು ಏನು?? ಎನ್ನುವ ಪ್ರಶ್ನೆಗೆ ಈ ಪಾತ್ರ ಉತ್ತರವಾಗಿತ್ತು.
“ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ”
ಗಂಡು-ಹೆಣ್ಣು ಮದುವೆಯ ಮೂಲಕ ಒಂದಾಗುವ ಪ್ರಕ್ರಿಯೆಯಿಂದ ಆರಂಭವಾಗುವ ದಾಂಪತ್ಯ ಕುಟುಂಬವಾಗಿ ಬೆಳಗುವ ಪರಿಯನ್ನು ಅನ್ಯಾದೃಶವಾಗಿ ಕೆ ಎಸ್ ನರಸಿಂಹಸ್ವಾಮಿ ಅವರ ಕವನಗಳಲ್ಲಿ ಚಿತ್ರಿಸಿದ್ದಾರೆ.
“ರಾಯರು ಬಂದರು ಮಾವನ ಮನೆಗೆ” ಎನ್ನುವ ಕವನ ಪದ್ಯಬಂಡಿಯಲ್ಲಿ ಹಾಡಿದ್ದುಬಿಟ್ಟರೆ ಅದನ್ನು ಕೆ ಎಸ್ ಎನ್ ಬರೆದಿದ್ದು ಎನ್ನುವ ವಿಷಯ ಈ ನಾಟಕ ನೋಡಿದ ಮೇಲೆ ಗೊತ್ತಾಗಿದ್ದು! ಈ ಕವನ ಮಾತ್ರ ಅಲ್ಲ! “ಅತ್ತಿತ್ತ ನೋಡದಿರು; ಅತ್ತು ಹೊರಳಾಡದಿರು..” ಇದು ಈ ಪಟ್ಟಿಯಲ್ಲಿ ಮೊದಲಿನದ್ದಾಗಿತ್ತು…
ಮದುವೆಯಾದ ಹೊಸತರಲ್ಲಿರುವ ವಿರಹವೇದನೆಯನ್ನು ಸುಂದರ ಕವನವನ್ನು ಹಾಡುವ ಮೂಲಕ ಕಲಾವಿದರ ನಾಜೂಕಿನ ಅಭಿನಯ ಎಲ್ಲರನ್ನು ನಗಿಸಿದ್ದಂತೂ ನಿಜ.. ಪ್ರೇಕ್ಷಕರ ನಡುವೆ ಕೆಲವು ನೆನಪಿನ ದೋಣಿ ಹತ್ತಿ ಹೋಗಿದ್ದು ನಿಜಾನೇ!!!
ಮಧ್ಯಮ ವರ್ಗದ ಕೌಟುಂಬಿಕ ಜೀವಸೆಲೆಯ ಪರಿಪೂರ್ಣ ಅಭಿವ್ಯಕ್ತಿ ಕೆ. ಎಸ್. ನ. ಕವಿತೆಗಳಲ್ಲಿದೆ. ಹಾಡು-ಹಸೆ, ತವರುಮನೆ-ಅತ್ತೆಮನೆ, ಕೌಟುಂಬಿಕ ರಸಪೂರ್ಣ ಪರಿಸರ, ಗಂಡ-ಹೆಂಡತಿಯರ ನಡುವೆ ಕ್ಲಿಷ್ಟ ಪ್ರಶ್ನೆಗಳಿರದ ಪರಸ್ಪರ ಭಾವಪೂರ್ಣ ತಿಳಿವಳಿಕೆ, ಅದರ ಮೂಲಕ ಲಭಿಸುವ ಸಹನೆ, ತ್ಯಾಗ, ತಾಳ್ಮೆಯ ಮನಸ್ಥಿತಿಗಳು ಇವೆಲ್ಲ ಆ ಭಾವ ಲೋಕದ ಸ್ರೋತಗಳು.
ದಾಂಪತ್ಯದ ಲೋಕದಲ್ಲಿ ಇಂತಹ ಮುನಿಸು, ಕೋಪ, ಜಗಳ, ಅಸಮಾಧಾನ ಸಹಜವಾದುದಾದರೂ ಕೊನೆಯಲ್ಲಿ ಮೂಡುವ ‘ಪಶ್ಚಾತ್ತಾಪ’ ಕೌಟುಂಬಿಕ ಬಂಧವನ್ನು ಗಟ್ಟಿಗೊಳಿಸುವ ಸಂಗತಿ ಎಂಬುದು ಕೆ.ಎಸ್.ನ. ಕವನಗಳು ದೃಢವಾದ ನಂಬಿಕೆಯಾಗಿದೆ. ದಾಂಪತ್ಯದ ಚೌಕಟ್ಟು ಇನ್ನಿಲ್ಲದಂತೆ ಪಲ್ಲಟಗೊಳ್ಳುತ್ತಿರುವ, ಶಿಥಿಲವಾಗುತ್ತಿರುವ ಸಮಕಾಲೀನ ವಾಸ್ತವಕ್ಕೆ ಮೈಸೂರ ಮಲ್ಲಿಗೆಯ ಪದ್ಯಗಳು ಔಷಧವಾಗಬಹುದೆ ಎಂಬ ಭರವಸೆ ಮೂಡಿದ್ದಂತೂ ಹೌದು.
ಮೈಸೂರು ಮಲ್ಲಿಗೆಯ ಜನಪ್ರಿಯತೆಯ ಇನ್ನೊಂದು ಮುಖವೆಂದರೆ; ಹಾಡುವಿಕೆಯ ಮೂಲಕ ಜನ ಮನದ ಕೋಶಕ್ಕೆ ತಲುಪಿಸಿದ ಹಾಡುಗಾರನ ಕೊಡುಗೆ. ಮೈಸೂರು ಮಲ್ಲಿಗೆಯ ಕವನಗಳನ್ನು ಹಾಡುಗಳನ್ನಾಗಿಸಿ ನಾಟಕಕ್ಕೆ ಇನ್ನಷ್ಟು ಮೆರಗು ತುಂಬಿದ ಗಾಯಕರಿಗೆ ನನ್ನೊಂದು ಸಲಾಂ. ಈ ನಾಟಕ ಕಾವ್ಯದ ಆತ್ಮ ಮತ್ತು ಭಾವನೆಗಳನ್ನು ಯಶಸ್ವಿಯಾಗಿ ರಂಗದ ಮೇಲೆ ತಂದಿದೆ. ನಾಟಕವು ಪ್ರೇಮ ಜೀವನದ ಸಾರ್ಥಕತೆ ಮತ್ತು ಸಾಮಾಜಿಕ ಅಂಶಗಳನ್ನು ಒಳಗೊಂಡಿದೆ. ಈ ಕಥಾಹಂದರವು ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗುವುದರ ಜೊತೆಗೆ ಮನೋರಂಜಿನೆಯಿಂದಿಗೆ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ.
ಒಂದು ಸುಂದರ ನಾಟಕದ ಪ್ರಸ್ತುತಿಯನ್ನು ನೋಡಿ ಖುಷಿ ನನಗಂತೂ ಇದೆ.
ಕೆ. ಎಸ್ ನರಸಿಂಹಸ್ವಾಮಿಯವರ ಕವನಗಳು ಇಂದಿಗೂ ಸಮಕಾಲೀನವೇ ಸರಿ; ಅವರ ಕವನಗಳೇ ಅವರನ್ನು ಓದುಗರಲ್ಲಿ ಪರಿಚಿತರನ್ನಾಗಿಸಿದ್ದು… ಒಟ್ಟಾರೆ ಮೈಸೂರು ಮಲ್ಲಿಗೆಯ ಘಮದಂತೆ ಈ ನಾಟಕ ಈಗಲೂ ಕಾಡುತ್ತಿದೆ. ಅವಕಾಶ ಸಿಕ್ಕರೆ ಈ ನಾಟಕ ನೀವೂ ನೋಡಿ.
- ಅನಘ ಶಿವರಾಮ್





















































