ವಿವೇಕಚೂಡಾಮಣಿಯ ಅತಿಶಯವಾದ ಲೋಕಪ್ರಿಯತೆಗೆ ಕಾರಣಗಳು ಸ್ಪಷ್ಟವಾಗಿಯೆ ಇವೆ.ಮೊದಲನೆಯದಾಗಿ ಿಲ್ಲಿಯ ಕಾವ್ಯಶೈಲಿ ಉತ್ಕೃಷ್ಟ ಮಟ್ಟದ್ದಾಗಿದೆ. ಎರಡನೆಯದಾಗಿ ಇಲ್ಲಿಯ ವಿಷಯಪ್ರಸ್ತಾವಗಳ ಅನುಕ್ರಮವು ವ್ಯವಸ್ಥಿತವೂ ಸೋಪಾನಕ್ರಮದ್ದೂ ಆಗಿರುವುದರಿಂದ ಇದು ಪ್ರಾರಂಭಿಕಹಂತದ ವೇದಾಂತಾಭ್ಯಾಸಿಗಳಿಗೆ ಅತ್ಯಂತ ಸಹಾಯಕವಾಗಿದೆ. ಮಾನವಜನ್ಮದ ಶ್ರೇಷ್ಠತೆ, ವೈರಾಗ್ಯರ್ಹತೆಯ ಗಳಿಕೆ, ಸದ್ಗುರೂಪಾಸನ, ಆತ್ಮಾನಾತ್ಮವಿವೇಕಸಂಪಾದನೆ, ಶಮದಮಾದಿಸಂಪತ್ತು, ಶ್ರವಣ ಮನನ ನಿದಿಧ್ಯಾಸನಗಳೆಂಬ ಸಾಧನೆಯ ಮುಖ್ಯ ಮಜಲುಗಳು, ಬಂಧ ವಿಮೋಚನೆ, ನಿರ್ವಿಕಲ್ಪಸಮಾಧಿ, ಅಂತಿಮವಾಗಿ ನಿಜಾನಂದಪ್ರಾಪ್ತಿ;- ಹೀಗೆ ಕ್ರಮಕ್ರಮವಾಗಿ ಪರಮಾರ್ಥಸಾಧನೆಯ ಹಂತಗಳನ್ನು ಇಲ್ಲಿ ರಮ್ಯವಾಗಿಯೂ ಶಕ್ತಿಯುತವಾಗಿಯೂ ನಿರೂಪಿಸಲಾಗಿದೆ.
ಸಾಧನೆಯಲ್ಲಿ ಭಕ್ತಿಯ ಸಂಗತತೆ, ಲಕ್ಷ್ಯಾಭಿಮುಖ ವೈಯುಕ್ತಿಕ ಪರಿಶ್ರಮದ ಅನಿವಾರ್ಯತೆ, ಮಾಯೆಯೆಂಬ ಸೃಷ್ಟಿತತ್ವ್ತದ ಪರಿಜ್ಞಾನ, “ತತ್ತ್ವಮಸಿ” ಮಹಾಕಾವ್ಯದ ಅರ್ಥಪ್ರಪಂಚ, ಆತ್ಮಸಾಕ್ಷತ್ಕಾರದಿಂದ ಲಬ್ಧವಾಗುವ ಆನಂಧಸ್ಥಿತಿ, ಜೀವನ್ಮುಕ್ತನ ಲಕ್ಷಣಗಳು;
-ಈ ಆಧಾರಭೂತ ಅಂಶಗಳೆಲ್ಲವನ್ನೂ ವಿವೇಕಚೂಡಾಮಣಿಯಲ್ಲಿ ಸ್ಮರಣೀಯ ರೀತಿಯಲ್ಲಿ ಪರಿಸ್ಫುಟಗೊಳಿಸಲಾಗಿದೆ.





Reviews
There are no reviews yet.