ಸ್ನೇಹ ಸಮ್ಮಿಲನವಾದ ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ: ಪತ್ರಕರ್ತ ರವಿಕಾಂತ ಬರಹ

ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ ನಡೆಯುತ್ತಿರುವ ಕನ್ನಡ ಪುಸ್ತಕ ಹಬ್ಬಕ್ಕೆ ಆಗಮಿಸಿದ ಪತ್ರಕರ್ತ ರವಿಕಾಂತ ಕುಂದಾಪುರ ಅವರು ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ಕನ್ನಡ ಪುಸ್ತಕ ಹಬ್ಬವು ಡಿಸೆಂಬರ್‌ 7ರವರೆಗೆ ನಡೆಯಲಿದೆ.

ಇಂದು ವಾರದ ರಜೆ, ರಾಜ್ಯೋತ್ಸವ ಬೇರೆ. ಕನ್ನಡದ ಯಾವುದಾದರೂ ಕಾರ್ಯಕ್ರಮಕ್ಕೆ ಹೋಗೋಣ ಎಂದುಕೊಂಡಾಗ ನೆನಪಾಗಿದ್ದು ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ಕನ್ನಡ ಪುಸ್ತಕ ಹಬ್ಬ.
ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಈ ಕನ್ನಡ ಪುಸ್ತಕ ಹಬ್ಬದಲ್ಲಿ ಒಂಥರ ಹಬ್ಬದ ವಾತಾವರಣವೇ ಇತ್ತು. ಹಬ್ಬದ ಸಲುವಾಗಿ ಊರಿಗೆ ಹೋದಾಗ ಅಪರೂಪಕ್ಕೆ ಹಲವರು ಸಿಗುವಂತೆ ಇಲ್ಲೂ ತಿಂಗಳು/ವರ್ಷಗಳ ಕಾಲ ಸಿಗದ ಸ್ನೇಹಿತರು/ಹಿರಿಯರು ಸಿಕ್ಕಿದರು.
ಪತ್ರಕರ್ತ ಮಿತ್ರರಾದ ಉಮೇಶ್ ಕುಮಾರ್ ಶಿಮ್ಲಡ್ಕ, ಪ್ರವೀಣ್‌ಚಂದ್ರ ಪುತ್ತೂರು, ರೇಷ್ಮಾ ಶೆಟ್ಟಿ ರಾಷ್ಟ್ರೋತ್ಥಾನ ಕುಟುಂಬದವರಾಗಿ ಸಿಕ್ಕಿದ್ದು ನಿರೀಕ್ಷಿತವಾಗಿತ್ತಾದರೂ ತುಂಬಾ ಖುಷಿ ನೀಡಿತು. ಜೊತೆಗೆ ಅನಿರೀಕ್ಷಿತವಾಗಿಯೂ ಒಂದಷ್ಟು ಜನರು ಸಿಕ್ಕಿದರು. ತಿಂಗಳುಗಳ ಕಾಲ ಸಿಗದ ಹಿರಿಯ ಪತ್ರಕರ್ತರು, ಸಹೋದ್ಯೋಗಿಯೂ ಆಗಿದ್ದ ರವಿಪ್ರಕಾಶ್ ಅವರೂ ಸಿಕ್ಕಿದರು. ಹಿರಿಯ‌ ಪತ್ರಕರ್ತರಾದ ನಮ್ಮೂರಿನ ಜಯರಾಮ ಅಡಿಗರ ದರ್ಶನವೂ ಆಯಿತು. ವಿಜಯವಾಣಿಯಲ್ಲಿ ಸಹೋದ್ಯೋಗಿಯಾಗಿದ್ದ, ಆಮೇಲೆ ನೋಡದೆ ವರ್ಷಗಳೇ ಕಳೆದಿದ್ದ ಸಂಜೀವ ಶಿರ್ನೂರ್ಕರ್ ಕೂಡ ಸಿಕ್ಕಿದರು.
ನಾನೂ ರವಿಪ್ರಕಾಶ್ ಅವರು ಮಾತನಾಡುವಾಗ ಮಧ್ಯಪ್ರವೇಶಿಸಿದ ಒಬ್ಬರು, ‘ಕಾಂತೋಕ್ತಿ’ ಪುಸ್ತಕ ಇದೆಯಾ? ಅಂತ ಓದುಗ ಗ್ರಾಹಕರ ರೀತಿ ರವಿಪ್ರಕಾಶ್ ಅವರಲ್ಲಿ ಎರಡೆರಡು ಸಲ ಕೇಳಿದರು. ‘ಅರೇ.. ಕಾಂತೋಕ್ತಿ ಎಂಬ ಪುಸ್ತಕ ಅದಾಗಲೇ ಪ್ರಕಟವಾಗಿದ್ಯಾ? ನಾನಿನ್ನು ಆ ಹೆಸರಲ್ಲಿ ಪುಸ್ತಕ ಮಾಡೋಕಾಗಲ್ವಾ?’ ಅಂತೆಲ್ಲ ಯೋಚನೆ ಮಾಡುತ್ತ, ಯಾರದು ಅಂತ ಗಮನಿಸಿದರೆ, ಅವರು ಬಿಜೆಪಿ ಹಿರಿಯ ನಾಯಕರಾದ ಪಿ.ಎನ್.ಸದಾಶಿವರು ಎನ್ನುವುದು ಗೊತ್ತಾಯಿತು. ಅವರನ್ನು ನೋಡದೆ ವರ್ಷಗಳೇ ಆಗಿದ್ದರಿಂದ ತಕ್ಷಣಕ್ಕೆ ಗುರುತು ಹಿಡಿಯಲು ಆಗಿರಲಿಲ್ಲ. ಹಾಗೇ ಅವರ ಜೊತೆಗೂ ಸ್ವಲ್ಪ ಹೊತ್ತು ಮಾತುಕತೆ ನಡೆಯಿತು.
ಹೀಗೆ ರಾಷ್ಟ್ರೋತ್ಥಾನದ ಕನ್ನಡ ಪುಸ್ತಕ ಹಬ್ಬ ಸ್ನೇಹ ಸಮ್ಮಿಲನವಾಗಿಯೂ ಪರಿಣಮಿಸಿತ್ತು. ಬರುತ್ತ ಜಗದೀಶ ಶರ್ಮಾ ಸಂಪ ಅವರ ‘ವ್ಯಾಸ ಸಂದರ್ಶನ’ ಪುಸ್ತಕ ತಂದೆ. ಸಾಮಾನ್ಯವಾಗಿ ನವೆಂಬರ್ ೧ರಂದು ಕನ್ನಡ ಕಾರ್ಯಕ್ರಮ ಮಾಡಿ ರಾಜ್ಯೋತ್ಸವ ಆಚರಿಸುತ್ತಾರೆ. ಇನ್ನು ಕೆಲವರು ನವೆಂಬರ್‌ನ ಯಾವುದಾದರೂ ಒಂದು ದಿನ ರಾಜ್ಯೋತ್ಸವ ಆಚರಿಸಿದರೆ, ಮತ್ತೆ ಕೆಲವರು ನವೆಂಬರ್ ತಿಂಗಳಿಡೀ ಆಚರಿಸುತ್ತಾರೆ. ಆದರೆ ರಾಷ್ಟ್ರೋತ್ಥಾನ ಸಾಹಿತ್ಯದವರು ನವೆಂಬರ್ ತಿಂಗಳಿಡೀ ಮಾತ್ರವಲ್ಲದೆ ಡಿಸೆಂಬರ್‌ ೭ರವರೆಗೂ ದಿನಾ ಬೆಳಗ್ಗೆ ಹತ್ತರಿಂದ ರಾತ್ರಿ ೯ರ ವರೆಗೆ ಈ ಹಬ್ಬ ಹಮ್ಮಿಕೊಂಡಿದ್ದಾರೆ. ವಿವಿಧ ಪ್ರಕಾಶಕರು, ಲೇಖಕರ ಹಲವು ಉತ್ತಮ ಪುಸ್ತಕಗಳ ಸಂಗ್ರಹವಿದೆ. ಜೊತೆಗೆ ಶೇ.೧೦ರಿದ ೫೦ರವರೆಗೆ ರಿಯಾಯಿತಿ ಕೂಡ ಇದೆ. ಕನಿಷ್ಠ ಒಂದು ಪುಸ್ತಕ ಕೊಂಡು ಓದಿ, ನವಂಬರ್ ಕನ್ನಡಿಗರಷ್ಟೇ ಆಗುವುದರಿಂದ ಬಚಾವಾಗಿ. ಏಕೆಂದರೆ ಕನ್ನಡ ಪುಸ್ತಕದ ಪುಟ ತಿರುವಿದಾಗೆಲ್ಲ ರಾಜ್ಯೋತ್ಸವ, ರಾಜ್ಯೋತ್ಸಾಹ..

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top