ರಾಷ್ಟ್ರೋತ್ಥಾನ ಸಾಹಿತ್ಯದಿಂದ ಬಿಡುಗಡೆಯಾದ ಬೆಸ್ಟ್ ಸೆಲ್ಲರ್ ಪುಸ್ತಕಗಳಲ್ಲಿ ಧರ್ಮಪಾಲ್ ಅವರ “ದಿ ಬ್ಯೂಟಿಫುಲ್ ಟ್ರೀ” ಕೂಡ ಒಂದು. ರಾಷ್ಟ್ರೋತ್ಥಾನ ಸಾಹಿತ್ಯದ ವಿವಿಧ ಪುಸ್ತಕ ಅಂಗಡಿಗಳಿಗೆ ಈ ಪುಸ್ತಕವನ್ನು ಹುಡುಕಿಕೊಂಡು ಓದುಗರು ಪ್ರತಿನಿತ್ಯ ಬರುತ್ತಿದ್ದಾರೆ. ರಾಷ್ಟ್ರೋತ್ಥಾನದ ಆನ್‌ಲೈನ್ ವೇದಿಕೆಗಳಲ್ಲಿ ಈ ಪುಸ್ತಕಕ್ಕೆ ಬೇಡಿಕೆ ತುಸು ಹೆಚ್ಚೇ ಎಂದು ಹೇಳಬಹುದು. ಭಾರತದ ಮೂಲೆಮೂಲೆಗಳಿಂದ ಓದುಗರು ಈ ಪುಸ್ತಕವನ್ನು ಪ್ರತಿನಿತ್ಯ ಖರೀದಿಸುತ್ತಿದ್ದಾರೆ. ಈ ಪುಸ್ತಕವನ್ನು ಇಂಗ್ಲಿಷ್ ಮಾತ್ರವಲ್ಲದೆ ಕನ್ನಡದಲ್ಲಿಯೂ ಓದಬಹುದು ಎಂಬ ವಿಷಯ ಸಾಕಷ್ಟು ಜನರಿಗೆ ತಿಳಿದಿರಬಹುದು ಅಥವಾ ತಿಳಿಯದೇ ಇರಬಹುದು.
ಚೆಲುವ ತರು (ದಿ ಬ್ಯೂಟಿಫುಲ್ ಟ್ರಿ)
ದಿ ಬ್ಯೂಟಿಫುಲ್ ಟ್ರಿ ಪುಸ್ತಕವನ್ನು Biblia Impex ಮೊದಲ ಬಾರಿಗೆ 1983ರಲ್ಲಿ ಪ್ರಕಟಿಸಿತ್ತು. 1995ರಲ್ಲಿ ಈ ಪುಸ್ತಕದ ಎರಡನೇ ಮುದ್ರಣವನ್ನು ರಾಷ್ಟ್ರೋತ್ಥಾನ ಸಾಹಿತ್ಯ ಬಿಡುಗಡೆ ಮಾಡಿತ್ತು. ಇದು ಇಂಗ್ಲಿಷ್ ಮಾತ್ರವಲ್ಲ, ಕನ್ನಡದಲ್ಲೂ ಲಭ್ಯವಿದೆ. ಡಾ. ಮಾಧವ ಪೆರಾಜೆ ಅವರು ಇದನ್ನು “ಚೆಲುವ ತರು” ಎಂಬ ಶೀರ್ಷಿಕೆಯಡಿ ಸರಳವಾಗಿ ಅನುವಾದಿಸಿದ್ದಾರೆ. ಇದರ ಮೊದಲ ಮುದ್ರಣ 2015ರಲ್ಲಿ ಬಿಡುಗಡೆಯಾಗಿತ್ತು. ಎರಡನೇ ಮುದ್ರಣ 2025ರಲ್ಲಿ ಬಿಡುಗಡೆಯಾಯಿತು. ಅಂದಹಾಗೆ, ಚೆಲುವ ತರು ಪುಸ್ತಕವನ್ನು “ಪರಸ್ಪರ ಪ್ರಕಾಶನ” ಪ್ರಕಟಿಸಿದೆ.
ಬ್ರಿಟಿಷರು ಭಾರತಕ್ಕೆ ಬರುವ ಮೊದಲು ನಾವು ಅನಾಗರಿಕರಾಗಿದ್ದೆವು, ನಮಗೆ ಶಿಕ್ಷಣವೇ ಇರಲಿಲ್ಲ, ಅವರೇ ನಮಗೆ ಅಕ್ಷರ ಕಲಿಸಿದರು ಎಂಬುದು ದೊಡ್ಡ ಸುಳ್ಳು. ಈ ಸುಳ್ಳನ್ನು ಪುರಾವೆಗಳೊಂದಿಗೆ ತೋರಿಸಿರುವ ಪುಸ್ತಕ ಇದು. 1931ರಲ್ಲಿ ಲಂಡನ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಮಹಾತ್ಮ ಗಾಂಧೀಜಿ “ಬ್ರಿಟಿಷರು ನಮ್ಮ ಸುಂದರ ಶಿಕ್ಷಣ ವೃಕ್ಷದ ಬೇರುಗಳನ್ನು ಕಿತ್ತುಹಾಕಿದರು. ಅಂದು ಭಾರತದಲ್ಲಿ ಅದ್ಭುತ ಶಿಕ್ಷಣ ವ್ಯವಸ್ಥೆ ಇತ್ತು.” ಎಂದು ಹೇಳಿದ್ದರು. ಪಾಶ್ಚಾತ್ಯರು ಇದನ್ನು ಲೇವಡಿ ಮಾಡಿದರು. ಆದರೆ, ಧರ್ಮಪಾಲ್ ಅವರು ಈ ಮಾತಿಗೆ ಐತಿಹಾಸಿಕ ಸಾಕ್ಷ್ಯಗಳನ್ನು ನೀಡಿದ್ದಾರೆ.
ಧರ್ಮಪಾಲ್ ಅವರು ಲಂಡನ್‌ನ ಆರ್ಕೈವ್‌ಗಳಲ್ಲಿ ಸಾವಿರಾರು ಪುಟಗಳ ಬ್ರಿಟಿಷ್ ದಾಖಲೆಗಳನ್ನು ಹುಡುಕಿದರು. 1820ರಿಂದ 1880ರ ನಡುವೆ ಬ್ರಿಟಿಷ್ ಅಧಿಕಾರಿಗಳಾದ ಥಾಮಸ್ ಮನ್ರೋ (ಮದ್ರಾಸ್), ವಿಲಿಯಂ ಆಡಮ್ (ಬಂಗಾಳ) ಮತ್ತು ಲೈಟನರ್ (ಪಂಜಾಬ್) ನಡೆಸಿದ ಸಮೀಕ್ಷೆಗಳಲ್ಲಿ ಭಾರತದ ಹಳೆಯ ಶಿಕ್ಷಣದ ವಿವರಗಳು ಅಡಗಿವೆ.

ಈ ದಾಖಲೆಗಳ ಪ್ರಮುಖ ಅಂಶಗಳು
ಪ್ರತಿ ಹಳ್ಳಿಗೆ ಒಂದು ಶಾಲೆ: ಬಂಗಾಳ ಮತ್ತು ಬಿಹಾರದ 1.5 ಲಕ್ಷ ಹಳ್ಳಿಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಶಾಲೆಗಳಿದ್ದವು. ಬಹುತೇಕ ಹಳ್ಳಿಗಳಲ್ಲಿ ಶಾಲೆಗಳು ಇದ್ದವು.
ಎಲ್ಲರಿಗೂ ಶಿಕ್ಷಣ: ಶಿಕ್ಷಣ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸರ್ವರಿಗೂ ಲಭ್ಯವಿತ್ತು.
ಇಂಗ್ಲೆಂಡಿಗಿಂತ ಉತ್ತಮ: ಅಂದಿನ ಇಂಗ್ಲೆಂಡಿನ ಶಿಕ್ಷಣಕ್ಕಿಂತ ಭಾರತದ ಶಾಲೆಗಳು, ಕಲಿಕಾ ಅವಧಿ ಮತ್ತು ಗುಣಮಟ್ಟ ಉತ್ತಮವಾಗಿದ್ದವು.
ಆರ್ಥಿಕ ಸ್ವಾವಲಂಬನೆ: ಶಿಕ್ಷಣ ಸಂಸ್ಥೆಗಳಿಗೆ ಸಮಾಜದಿಂದಲೇ ಹಣ ಸಿಗುತ್ತಿತ್ತು. ಇದರಿಂದ ವ್ಯವಸ್ಥೆ ಸುಗಮವಾಗಿ ನಡೆಯುತ್ತಿತ್ತು.
ನಮ್ಮ ಶಿಕ್ಷಣ ತಜ್ಞರು ಈ ದಾಖಲೆಗಳನ್ನು ನಿರ್ಲಕ್ಷಿಸಿದ್ದು ದುರಂತ. ಮೆಕಾಲೆಯ ದಾಸ್ಯದ ಹಾದಿಯಲ್ಲೇ ಸಾಗುತ್ತಿರುವ ನಾವು ನಮ್ಮ ಹಳೆಯ ಜ್ಞಾನವನ್ನು ಮರೆತಿದ್ದೇವೆ.
“ಚೆಲುವ ತರು” ಕೇವಲ ಪುಸ್ತಕವಲ್ಲ; ಅದು ನಮ್ಮ ಕಳೆದುಹೋದ ಹೆಮ್ಮೆಯ ಸಂಕೇತ. ವಸಾಹತುಶಾಹಿ ಮನಸ್ಥಿತಿಯಿಂದ ಹೊರಬಂದು, ನಮ್ಮ ಹಳೆಯ ಶಿಕ್ಷಣ ವ್ಯವಸ್ಥೆಯ ವೈಜ್ಞಾನಿಕತೆ ಮತ್ತು ಸಮಾನತೆಯನ್ನು ತಿಳಿಯಲು ಪ್ರತಿ ಭಾರತೀಯನೂ ಇದನ್ನು ಓದಬೇಕು. ಭಾರತದ ಬೌದ್ಧಿಕ ಸ್ವಾತಂತ್ರ್ಯಕ್ಕೆ ಇಂತಹ ಸತ್ಯಗಳು ಅಗತ್ಯ.














