ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸುವ 5ನೇ ಕನ್ನಡ ಪುಸ್ತಕ ಹಬ್ಬ ಇದೇ ನವೆಂಬರ್ 1ರಿಂದ ಡಿಸೆಂಬರ್ 7ರವರೆಗೆ 37 ದಿನಗಳ ಕಾಲ ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದೆ. ಪುಸ್ತಕ ಹಬ್ಬವನ್ನು ಮೈಸೂರು ರಾಜವಂಶಸ್ಥ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದಾರೆ.
ಕನ್ನಡ ಪುಸ್ತಕ ಹಬ್ಬ 2025ರ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ಸಾಮರ್ಥ್ಯ ನಿರ್ಮಾಣ ಆಯೋಗದ ಮಾನವ ಸಂಪನ್ಮೂಲ ಸದಸ್ಯರಾದ ಡಾ|| ಆರ್. ಬಾಲಸುಬ್ರಹ್ಮಣ್ಯಂ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಬಹುಶ್ರುತ ವಿದ್ವಾಂಸರು ಪ್ರೊ|| ಮಲ್ಲೇಪುರಂ ಜಿ. ವೆಂಕಟೇಶ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷರಾದ ಶ್ರೀ ಎಂ.ಪಿ. ಕುಮಾರ್ ವಹಿಸಲಿದ್ದಾರೆ.
ಕನ್ನಡ ಪುಸ್ತಕ ಹಬ್ಬ 2025ರ ಉದ್ಘಾಟನೆ
ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್ 1ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ
ನವೆಂಬರ್ 1, 2025ರ ಶನಿವಾರ ಬೆಳಗ್ಗೆ 9.30ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೊನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿ. ನಾಗರಾಜ್, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ದಿನೇಶ್ ಹೆಗ್ಡೆ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಕನ್ನಡ ಪುಸ್ತಕ ಹಬ್ಬದ ಬಗ್ಗೆ
ಸ್ವಾತಂತ್ರ್ಯಪೂರ್ವದಿಂದಲೂ ಕನ್ನಡದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ರಾಷ್ಟ್ರೀಯ ಸಾಹಿತ್ಯದ ವಾರಸಿಕೆಯನ್ನು ಮುಂದುವರಿಸುವುದು; ಓದುಗರಲ್ಲಿ ಶುದ್ಧ ರಾಷ್ಟ್ರೀಯ ದೃಷ್ಟಿಯನ್ನು ಮೂಡಿಸುವುದು; ವಿವಿಧ ಸಾಹಿತ್ಯಪ್ರಕಾರಗಳ ಮೂಲಕ ಭಾರತೀಯ ಸಂಸ್ಕೃತಿ-ಪರಂಪರೆಯ ಮೌಲ್ಯಗಳನ್ನು ಜನಮಾನಸದಲ್ಲಿ ಬೇರೂರಿಸುವುದು – ಈ ಉದ್ದೇಶಗಳನ್ನಿಟ್ಟುಕೊಂಡು ಪುಸ್ತಕಗಳ ಪ್ರಕಟನೆ ಹಾಗೂ ಸದಭಿರುಚಿಯ ಸಾಹಿತ್ಯಪ್ರಸಾರಕ್ಕಾಗಿ 1965ರಲ್ಲಿ ಪ್ರಾರಂಭವಾದ ‘ರಾಷ್ಟೋತ್ಥಾನ ಸಾಹಿತ್ಯ’ ತನ್ನ ಉದ್ದೇಶಸಾಧನೆಯ ದಿಕ್ಕಿನಲ್ಲಿ ಅರವತ್ತು ವರ್ಷ ಕ್ರಮಿಸಿದೆ. ಆರು ದಶಕಗಳ ನಮ್ಮ ನಿರಂತರ ಪ್ರಯತ್ನಗಳ ಫಲವೆಂಬಂತೆ ಇಂದು ಕನ್ನಡದಲ್ಲಿ ರಾಷ್ಟ್ರೀಯ ಸಾಹಿತ್ಯವನ್ನು ಧೈರ್ಯವಾಗಿ ಪ್ರಕಟಿಸಬಲ್ಲ ಹಲವು ಪ್ರಕಾಶನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ; ರಾಷ್ಟ್ರೀಯ ಸಾಹಿತ್ಯವನ್ನು ಪ್ರೀತಿಯಿಂದ ಸ್ವೀಕರಿಸುವ ಬಹುದೊಡ್ಡ ಓದುಗವರ್ಗ ನಿರ್ಮಾಣವಾಗಿದೆ.
ಸದಭಿರುಚಿಯ ಸಾಹಿತ್ಯಪ್ರಸಾರಕ್ಕಾಗಿ ‘ಮಕ್ಕಳ ಕೈಗೆ ಸರಸ್ವತಿ’, ‘ಮನೆಗೊಂದು ಗ್ರಂಥಾಲಯ’, ‘ಮನೆಮನೆಗೆ ಪುಸ್ತಕ’, ‘ಸಾಹಿತ್ಯವಾಹಿನಿ’, ಪುಸ್ತಕಪ್ರದರ್ಶನಗಳು ಸೇರಿದಂತೆ ಹಲವು ರೀತಿಯ ಚಟುವಟಿಕೆಗಳನ್ನು ಕಳೆದ ಅರವತ್ತು ವರ್ಷಗಳಿಂದಲೂ ನಡೆಸಿಕೊಂಡು ಬಂದಿದ್ದೇವೆ. ಅವುಗಳ ಮುಂದುವರಿಕೆಯಾಗಿ 2021ರಿಂದ ಬೆಂಗಳೂರು ಕೇಂದ್ರಿತವಾಗಿ, ನವೆಂಬರ್ ತಿಂಗಳುಪೂರ್ತಿ ‘ಕನ್ನಡ ಪುಸ್ತಕ ಹಬ್ಬ’ ಹೆಸರಿನಲ್ಲಿ ಸಾಹಿತ್ಯ-ಸಾಂಸ್ಕೃತಿಕ ಉತ್ಸವವನ್ನು ನಡೆಸಲಾಗುತ್ತಿದೆ. ಈ ಬಾರಿ, ಈ ‘ಕನ್ನಡ ಪುಸ್ತಕ ಹಬ್ಬ’ವು ನವೆಂಬರ್ 1 ರಿಂದ ಡಿಸೆಂಬರ್ 7ರ ವರೆಗೆ ಒಟ್ಟು ಮೂವತ್ತೇಳು ದಿನಗಳ ಕಾಲ ನಡೆಯಲಿದೆ. ರಾಷ್ಟೋತ್ಥಾನ ಸಾಹಿತ್ಯದ ಪ್ರಕಟನೆಗಳಲ್ಲದೆ ಬೇರೆ ಬೇರೆ ಪ್ರಕಾಶಕರ ಸದಭಿರುಚಿಯ ಸಾಹಿತ್ಯಕೃತಿಗಳು ಸಾಧ್ಯವಾದಷ್ಟೂ ಹೆಚ್ಚಿನ ರಿಯಾಯಿತಿಯಲ್ಲಿ ಓದುಗರಿಗೆ ದೊರೆಯುವಂತಾಗಬೇಕು – ಎಂಬುದು ಈ ಹಬ್ಬದ ಮೂಲ ಆಶಯ. ಈ ಮೂವತ್ತೇಳು ದಿನಗಳಲ್ಲಿ, ಸಂಸ್ಕಾರಭಾರತೀ ಸಹಯೋಗದಲ್ಲಿ ಆತ್ಮವಿಕಾಸಕ್ಕೆ ಪೂರಕವಾದ ವಿವಿಧ ಕಲಾಪ್ರಕಾರಗಳ ಪ್ರಸ್ತುತಿಯೂ ನಡೆಯಲಿದೆ.
ಕನ್ನಡ ಪುಸ್ತಕ ಹಬ್ಬ 2025: ಕಾರ್ಯಕ್ರಮಗಳ ಕ್ಯಾಲೆಂಡರ್
ಕನ್ನಡ ಪುಸ್ತಕ ಹಬ್ಬದ ಉದ್ಘಾಟನೆ- ಆಮಂತ್ರಣ















